ಹೊಸ ಕಾನೂನುಗಳು

ಹೊಸ ಕಾನೂನುಗಳು

ಕಾಲಕಾಲಕ್ಕೆ ಕಾನೂನನ್ನು ಕೂಲಂಕುಷವಾಗಿ ಮರುಪರಿಶೀಲಿಸಿ ತಂತ್ರಜ್ಞಾನದ ಬೆಳವಣಿಗೆಗಳು ಮತ್ತು ಸಮಾಜದ ಬದಲಾವಣೆಗಳಿಗೆ ಅನುಗುಣವಾಗಿ ಅವನ್ನು ಮರುರೂಪಿಸಬೇಕು ಎಂದು ಎಲ್ಲರೂ ಒಪ್ಪುತ್ತಾರೆ. ಆದರೆ ಅರ್ಥವಾಗದ ಹೊಸ ಹೆಸರುಗಳಡಿ ಇಡೀ ಕಾನೂನುಗಳನ್ನೇ ಹೊಸದಾಗಿ ತರುವ ಅವಶ್ಯಕತೆಯಿಲ್ಲ, ಅದರಲ್ಲೂ ಈ ಹೊಸ ಕಾನೂನುಗಳಲ್ಲಿ ವಸ್ತುತ ಹಳೆಯ ಕಾನೂನುಗಳನ್ನು ಮೂಲಭೂತವಾಗಿ ಉಳಿಸಿಕೊಂಡಾಗ. ಆದರೆ ಈಗ ಸಂಪೂರ್ಣ ಹೊಸ ಕ್ರಿಮಿನಲ್ ಕಾನೂನುಗಳನ್ನು ಪರಿಚಯಿಸಲಾಗುತ್ತಿದೆ ಮತ್ತು ಅವುಗಳಿಗೆ ಕ್ಲಿಷ್ಟ ಹೆಸರುಗಳನ್ನೂ ಇಡಲಾಗಿದೆ: ಇಂಡಿಯನ್ ಪೀನಲ್ ಕೋಡ್ ಬದಲಿಗೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), ಕ್ರಿಮಿನಲ್ ಪ್ರೊಸೀಜರ್ ಕೋಡ್ ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್) ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್ ಬದಲಿಗೆ ಭಾರತೀಯ ಸಾಕ್ಷ್ಯ ಬಿಲ್. ಇದರ ವಿರುದ್ಧ ಕೇಳಿಬಂದಿರುವ ಮೊದಲ ಟೀಕೆ ಈ ಕಾನೂನುಗಳನ್ನು ಸಂಪೂರ್ಣವಾಗಿ ಅವುಗಳ ಹಿಂದಿ ಹೆಸರುಗಳಲ್ಲಿ ಉಲ್ಲೇಖಿಸುವುದು ಅನಗತ್ಯ ಎಂದು. ಭಾರತದಲ್ಲಿನ ಪ್ರತಿಯೊಂದು ಕಾನೂನು ಪ್ರತಿ ರಾಜ್ಯದ ಆಯಾ ಅಧಿಕೃತ ಭಾಷೆಯಲ್ಲಿ ಅಧಿಕೃತ ಅನುವಾದವನ್ನು ಹೊಂದಿದೆ; ಹಾಗಾಗಿ ಐಪಿಸಿ, ಸಿಆರ್ಪಿಸಿ ಮತ್ತು ಎವಿಡೆನ್ಸ್ ಆಕ್ಟ್ ಅನ್ನು ಅವುಗಳ ಹಿಂದಿ ಹೆಸರುಗಳಲ್ಲಿ ಮಾತ್ರ ಉಲ್ಲೇಖಿಸುವ ಅಗತ್ಯವು ಪ್ರಶ್ನಾರ್ಹವಾಗಿದೆ. ಕ್ರಿಮಿನಲ್ ಪ್ರೊಸೀಜರ್ ಕಾನೂನನ್ನು ೧೯೭೩ ರಲ್ಲಿ ಪರಿಷ್ಕರಿಸಿ ಪುನಃ ಜಾರಿಗೊಳಿಸಲಾಯಿತು, ಮತ್ತು ಇದನ್ನು ಸಿಆರ್ಪಿಸಿ, ೧೯೭೩, ಎಂದು ಕರೆಯಲಾಗುತ್ತದೆ, ಇದು ಅದರ ೧೮೯೮ ಆವೃತ್ತಿಯಿಂದ ಭಿನ್ನವಾಗಿದೆ. ಹಿಂದಿ ಹೆಸರುಗಳನ್ನು ಹೊಂದುವ ಉದ್ದೇಶವು ಕ್ರಿಮಿನಲ್ ಕಾನೂನಿನ ಆಂಗ್ಲೀಕರಣವನ್ನು ಸಂಕೇತಿಸುವ ಪ್ರಯತ್ನವಾಗಿದೆ. ಆದರೆ ಹೊಸ ಕಾನೂನುಗಳ ಪ್ರಾಥಮಿಕ ಅವಲೋಕನವು ಹಳೆಯ ಕಾನೂನುಗಳ ಮೂಲ ಭಾಷೆಯನ್ನೇ ಬಹುತೇಕ ಉಳಿಸಿಕೊಳ್ಳಲಾಗಿದೆ ಎಂದು ತೋರುತ್ತದೆ. ಹಾಗಿದ್ದಲ್ಲಿ ಹಳೆಯ ಕಾನೂನುಗಳಿಗೆ ತಿದ್ದುಪಡಿಗಳನ್ನು ತಂದಿದ್ದರೂ ಸಾಕಿತ್ತು, ಹೊಸ ಕಾನೂನುಗಳ ಅಗತ್ಯವೇನಿತ್ತು ಎಂಬ ಪ್ರಶ್ನೆ ಉದ್ಭವಿಸದಿರದು. ಈ ಕಾನೂನುಗಳ ಕುರಿತು ನಡೆದ ಪೂರ್ವ ಸಮಾಲೋಚನಾ ಪ್ರಕ್ರಿಯೆ ಅಸಮರ್ಪಕವಾಗಿರುವ ಕಾರಣ, ಸಂಸದೀಯ ಸ್ಥಾಯಿ ಸಮಿತಿ ಈ ‘ಸಂಹಿತೆ’ಗಳನ್ನು ಪರಿಶೀಲಿಸಲಿರುವುದು ಸಾಮಾಧಾನಕಾರ ವಿಷಯ.

ಈ ಹೊಸ ಸಂಹಿತೆಯಲ್ಲಿ ‘ದೇಶದ್ರೋಹ’ದ ಸೆಕ್ಷನ್ ಅನ್ನು ತೆಗೆದುಹಾಕಿರುವುದು ಸ್ವಾಗತಾರ್ಹ ಮತ್ತು ಅದರ ಸ್ಪಷ್ಟ ಸಮಾನವಾದ ಹೊಸ ಸೆಕ್ಷನ್ ೧೫೦, ಸರ್ಕಾರದ ವಿರುದ್ಧ ‘ಅಸಮಾಧಾನ’ ಉಂಟುಮಾಡುವುದು, ಪ್ರಚಾರ ಮಾಡುವುದು ಅಥವಾ ಅದನ್ನು ‘ದ್ವೇಷ ಅಥವಾ ತಿರಸ್ಕಾರ’ಕ್ಕೆ ಗುರಿಪಡಿಸುವುದು ಎಂಬಂತಹ ಅತಿಯಾದ ಪದಗಳನ್ನು ಬಳಸುವುದಿಲ್ಲ. ಇದು ಪ್ರತ್ಯೇಕತಾವಾದ ಮತ್ತು ಸಶಸ್ತ್ರ ದಂಗೆಯನ್ನು ಉತ್ತೇಜಿಸುವುದನ್ನು ಅಪರಾಧೀಕರಿಸುತ್ತದೆ, ಆದರೆ ಇದು ‘ವಿಧ್ವಂಸಕ ಚಟುವಟಿಕೆಗಳು’ ಮತ್ತು ‘ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳು’ ಎಂಬ ಪದಗಳನ್ನು ಬಳಸುತ್ತದೆ. ಇದನ್ನು ದುರುಪಯೋಗಪಡಿಸಿಕೊಳ್ಳಲು ಅನುಮತಿಸಬಾರದು. ಮತ್ತೊಂದು ಸಂಭಾವ್ಯ ದುರ್ಬಳಕೆಯ ನಿಬಂಧನೆ ಎಂದರೆ ಹೊಸ ಸೆಕ್ಷನ್ ೧೯೫ (ಸೆಕ್ಷನ್ ೧೫೩ಬಿ ಐಪಿಸಿಗೆ ಸಮನಾಗಿರುತ್ತದೆ). ಇದು “ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆ ಅಥವಾ ಭದ್ರತೆಗೆ ಅಪಾಯವನ್ನುಂಟುಮಾಡುವ ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಮಾಹಿತಿಯನ್ನು ತಯಾರಿಸುವುದು ಅಥವಾ ಪ್ರಕಟಿಸುವುದ”ಕ್ಕೆ ದಂಡ ವಿಧಿಸುತ್ತದೆ. ‘ಮಾಬ್ ಲಿಂಚಿಂಗ್’ ಮತ್ತು ‘ಸಂಘಟಿತ ಅಪರಾಧ’ ಹೊಸ ಪ್ರತ್ಯೇಕ ಸೆಕ್ಷನ್ನುಗಳಡಿ ಅಪರಾಧಗಳು ಎಂದು ಗುರುತಿಸಲಾಗಿದೆ. ಆದರೆ ‘ದ್ವೇಷ ಭಾಷಣ’ದ ವ್ಯಾಖ್ಯಾನ ಮತ್ತು ಅದರ ವಿರುದ್ಧ ಸೂಕ್ತ ಕಾನೂನು ಕ್ರಮದ ಬಗ್ಗೆ ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದ್ದರೂ ಅದಕ್ಕೆ ಒಂದು ಪ್ರತ್ಯೇಕ ಸೆಕ್ಷನ್ನು ಇಲ್ಲದಿರುವುದು ಒಂದು ಗಂಭೀರ ಲೋಪ. ನೂತನ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಗೈರುಹಾಜರಿಯಲ್ಲಿ ಘೋಷಿತ ಅಪರಾಧಿಗಳ ವಿಚಾರಣೆಯನ್ನು ನಡೆಸಲು ಇದು ಅನುವು ಮಾಡಿಕೊಡುತ್ತದೆ. ಪೊಲೀಸರು ಆರೋಪಿಗಳಿಂದ ಯಾವುದೇ ಸ್ವತ್ತುಗಳನ್ನು ಅಮಾನತ್ತು ಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ವೀಡಿಯೊ ಚಿತ್ರೀಕರಣ ಮಾಡುವುದನ್ನು ಕಡ್ಡಾಯಗೊಳಿಸುವುದು ಮತ್ತು ಅಧಿಕಾರಿಗಳು ೧೨೦ ದಿನಗಳಲ್ಲಿ ಮಂಜೂರಾತಿ ನೀಡಲು ವಿಫಲವಾದರೆ ಡೀಮ್ಡ್ ಮಂಜೂರಾತಿಗೆ ಸಹ ನಿಬಂಧನೆ ತಂದಿರುವುದು ಸ್ವಾಗತಾರ್ಹ. ಆದರೆ ರಿಮಾಂಡ್ ನಿಬಂಧನೆಗಳು ಪ್ರಸ್ತುತ ೧೫ ದಿನಗಳ ಮಿತಿ ಮೀರಿ ಪೊಲೀಸ್ ಕಸ್ಟಡಿಗೆ ಅನುಮತಿ ನೀಡುವಂತೆ ತೋರುತ್ತಿದೆ. ಇದು ಟೀಕಾರ್ಹ. ಹೊಸ ಕಾನೂನುಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವ ಅಗತ್ಯವಿದೆ, ಹೊಸ ಹೆಸರುಗಳಲ್ಲ.

Read More

TIS Staff

wp_ghjkasd_staff

Leave a Reply

Your email address will not be published. Required fields are marked *